ಶೀರ್ಷಿಕೆ – ಕಲೆ-ಬ್ರಹ್ಮಕೃತಿಯ ಟೀಕೆ
ಸ್ರವಿಸುವುದು ಜೀವರಸ ಹೃದಯಗರ್ತದ ತಳದಿ ಕಿವಿಗಾ ರಹಸ್ಯದುಲಿ ಕಾವ್ಯಗಾನಗಳಿಂ ಭುವನದಾಚಿನ ರಹಸ್ಯದ ಕೀರ್ತಿ ವೇದಗಳ ರವದಿನೆಂದಾರ್ಷಮತ – ಮಂಕುತಿಮ್ಮ|| 464 ||
ಸ್ವರರಾಗಗೀತಿಗಳು ನಾಟ್ಯಾಭಿನೀತಿಗಳು ಕರೆದೇಳಿಸುವುವು ಮನಸಿನಲಿ ನಿದ್ರಿಸುವಾ ಪರಿಪರಿಯ ಭಾವಗಳ ಗೂಢಸ್ವಭಾವಗಳ ಪರಮೇಷ್ಠಿ ಟೀಕು ಕಲೆ – ಮಂಕುತಿಮ್ಮ|| 465 ||
ವ್ಯಸನಕಾರಣವೊಂದು ಹಸನಕಾರಣವೊಂದು ರಸಗಳೀಯೆರಡಕಿಂತಾಳವಿನ್ನೊಂದು ಭ್ರುಶವಿಶ್ವಜೀವಿತಗಭೀರತೆಯ ದರ್ಶನದ ರಸವದದ್ಭುತಮೌನ – ಮಂಕುತಿಮ್ಮ|| 466 ||
ಗಣನೆಗೆಟುಕದ ಗುಣಗಳಾತ್ಮದವವರ್ಣ್ಯಗಳು ಮನದ ದೇಹದ ಜೀವದೆಲ್ಲ ಕರಣಗಳಾ ಅನುಭವದ ಮುಕುರದೊಳ್ ಪ್ರತಿಫಲಿಸೆ ತನ್ನದೊಂ- ದಣುವದುವೆ ಸುಂದರವೊ – ಮಂಕುತಿಮ್ಮ|| 467 ||
ಲಾವಣ್ಯವಾತ್ಮಗುಣವದರಿಂದೆ ಲೋಕಜನ ದೇವನನು ಕಮನೀಯ ವಿಗ್ರಹಂಗಳಲಿ ಭಾವಿಸುತ ತಮ್ಮಿಷ್ಟಭೋಗಗಳನರ್ಪಿಸುವರು ಸೇವೆಯಿಂ ನಲಿಯುವರು- ಮಂಕುತಿಮ್ಮ ।। 468 ||