ಶೀರ್ಷಿಕೆ – ಮತತ್ರಯ
ಒಂದುದಿನವೌತಣಕೆ, ಉಪವಾಸಕಿನ್ನೊಂದು ಸಂದಣಿಯ ದಿನವೊಂದು, ಬಿಡುವು ದಿನವೊಂದು ಹೊಂದಿರ್ದೊಡುಭಯಮುಂ ಜೀವಕದು ಚಲನ ಒಂದು ಕಾಲ್ನಡೆ ಸುಖವೆ? – ಮಂಕುತಿಮ್ಮ|| 769 ||
ನೇತ್ರಯುಗಳಂ ಪಿಡಿಗುಮೊಂದು ಲಕ್ಷ್ಯವ ಕೂಡಿ ಹಸ್ತಯುಗ ಸಾಧಿಪುದು ಮನದರ್ಥವೊಂದನ್ ದ್ವೈತದಿಂದದ್ವೈತವದ್ವೈತದೊಳ್ ದ್ವೈತ ಚೈತನ್ಯಲೀಲೆಯಿದು – ಮಂಕುತಿಮ್ಮ|| 770 ||
ನೀರಧಿ ಬ್ರಹ್ಮ, ನೀರ್ಗಲ್ ಜೀವವೆನುತೊಂದು ಕ್ಷೀರವದು, ಘೃತವಿದದರೊಳಗೆನ್ನುತೊಂದು ಕೀರು ಪರಮಾನ್ನವದು, ದ್ರಾಕ್ಷಿಯಿದೆನುತ್ತೊಂದು ಮೂರಿಂತು ಮತವಿವರ – ಮಂಕುತಿಮ್ಮ|| 771 ||
ಮೂರಿರಲಿ ವಾದ, ಮುನ್ನೂರಿರಲಿ; ಸಕಲರುಂ ಸಾರವಸ್ತುವನೊಂದನೊಪ್ಪಿಕೊಳುವವರೇ ಪಾರಮಾರ್ಥಿಕವನಂತೆಣಿಸಿದ ವ್ಯವಹಾರ ಭಾರವಾಗದು ಜಗಕೆ – ಮಂಕುತಿಮ್ಮ|| 772 ||
ಹೊರಗೆ ಲೋಕಾಸಕ್ತಿಯೊಳಗೆ ಸಕಲ ವಿರಕ್ತಿ ಹೊರಗೆ ಕಾರ್ಯಧ್ಯಾನವೊಳಗುದಾಸೀನ ಹೊರಗೆ ಸಂಸ್ಕೃತಿಭಾರವೊಳಗದರ ತಾತ್ಸಾರ ವರಯೋಗಮಾರ್ಗವಿದು – ಮಂಕುತಿಮ್ಮ|| 773 ||