
ಪ್ರಿಯ ಅಧ್ಯಾತ್ಮ ಆರಾಧಕರೇ,
ಕಳೆದ ದಶಕದ ಹಲವಾರು ವರ್ಷಗಳಿಂದ ಶ್ರೀಮತಿ ಶಾರದ ರಮೇಶ್ ಮತ್ತು ಶ್ರೀಯುತ ಹೆಚ್.ಎಸ್.ರಮೇಶ್ ರವರ ಅಧ್ಯಾತ್ಮ ವಾಚನ, ವ್ಯಾಖ್ಯಾನವನ್ನು ಪ್ರತ್ಯಕ್ಷವಾಗಿ ಕೇಳುತ್ತ ಬಂದಿದ್ದೇವೆ. ಇದರ ಸತ್ವ ಲಾಭವು ಕೇವಲ ಒಂದು ವಲಯಕ್ಕೆ ಸೀಮಿತವಾಗದೆ, ಇಡೀ ಕನ್ನಡ ನಾಡಿನ, ಹೊರ ನಾಡಿನ ಅಧ್ಯಾತ್ಮ ಚಿಂತಕರಿಗೂ ತಲುಪಲಿ ಎಂಬ ತುಂಬು ಹಂಬಲದಿಂದ “ವ್ಯಾಸಪ್ರಜ್ಞಾ” ಹೆಸರಿನ “ಕನ್ನಡ ಅಧ್ಯಾತ್ಮ ಜಾಲತಾಣ”ವನ್ನು ಲೋಕಾರ್ಪಣ ಮಾಡುತ್ತಿದ್ದೇವೆ.
ಈ ಜಾಲತಾಣದಲ್ಲಿ ಅಳವಡಿಸಿರುವ ಅಧ್ಯಾತ್ಮ ಪ್ರವಚನ ಮಾಲಿಕೆಗಳು, ಪ್ರಸ್ಥಾನತ್ರಯ ಮತ್ತು ಆದಿಗುರುಗಳಾದ ಶ್ರೀ ಶ್ರೀ ಶಂಕರ ಭಗವತ್ಪಾದರ ಪ್ರಕರಣ ಗ್ರಂಥವಾದ “ವಿವೇಕ ಚೂಡಾಮಣಿ” ಮತ್ತು ಇನ್ನಿತರ ಪ್ರಕರಣ ಶ್ಲೋಕಗಳನ್ನು ಆಧರಿಸಿದೆ. ಇದಲ್ಲದೆ ಪರಮ ಪೂಜ್ಯ ಶ್ರೀ ಡಿ ವಿ.ಜಿ. ವಿರಚಿತ “ಮಂಕುತಿಮ್ಮನ ಕಗ್ಗ” ವಾಚನ ವ್ಯಾಖ್ಯಾನವು ಸೇರಿದೆ. ಇವುಗಳನ್ನು ಅಧ್ಯಾತ್ಮ ದಂಪತಿಗಳಾದ ಶ್ರೀಮತಿ ಶಾರದ ರಮೇಶ್ ಮತ್ತು ಶ್ರೀ ರಮೇಶ್ ರವರು ಸರಳ ಕನ್ನಡದಲ್ಲಿ ವಾಚಿಸಿ ವ್ಯಾಖ್ಯಾನಿಸಿದ್ದಾರೆ. ಈ ವ್ಯಾಖ್ಯಾನ ಶೈಲಿಯ ಪರಿಯು ಮಾನವನ ನಿತ್ಯ ಬದುಕಿನ ಶಾಂತಿ, ಸೌಖ್ಯಕ್ಕೆ ಮಾರ್ಗಸೂಚಿ ಎಂಬುದಕ್ಕೆ ನಾವು ಮತ್ತು ನಮ್ಮ ಬದುಕೇ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಅಧ್ಯಾತ್ಮ ಚಿಂತಕರೆ, ಈ ಪ್ರವಚನ ಮಾಲಿಕೆಯನ್ನು ಆಲಿಸುತ್ತ ನೀವು ನೀಡುವ ಎಲ್ಲ ಉತ್ತಮ ಸಲಹೆ ಸೂಚನೆಗಳಿಗೆ ಸದಾ ಸರ್ವದಾ ಸ್ವಾಗತ. ಬನ್ನಿ, ವ್ಯಾಸಪ್ರಜ್ಞಾ ಮಂದಿರವನ್ನು ಪ್ರವೇಶ ಮಾಡೋಣ. ಭಕ್ತಿ ಶ್ರದ್ಧಾಯುಕ್ತರಾಗಿ ಕೃತಾರ್ಥರಾಗೋಣ.
ಧನ್ಯವಾದಗಳು.