ಶೀರ್ಷಿಕೆ – ಮಾಯೆ ಕೇಕೆಯ ಪುತ್ರಿ
ವಾಯುವಂ ಕಾಣ್ಬನಾರ್ ? ತತ್ಕ್ರಿಯೆಯ ಕಾಣನಾರ್? ಮಾಯೆಯಂತಪರೀಕ್ಷ್ಯ ಸತ್ವದೀಕ್ಷ್ಯಕೃತಿ ರಾಯನಂ ಕಾಣಲಾಗದೆ ಮಂತ್ರಿಯಡೆ ಸಾರ್ವ ದೇಯಾರ್ಥಿವೊಲು ನೀನು – ಮಂಕುತಿಮ್ಮ|| 144 ||
ಮಾಯೆಯೇ ಸರಸಿ, ನಿರ್ಗುಣ ಸತ್ವದಿಂದೇನು? ಮಾಯೆ ಬಿಡೆ ಜಗವೆತ್ತ? ಜೀವಕಥೆಯತ್ತ? ಮೇಯವಲ್ಲದ ಮಹಿಮೆ ಛಾಯೆಯಾ ಬ್ರಹ್ಮನದು ತಾಯವಳು ನೀಂ ಮಗುವು – ಮಂಕುತಿಮ್ಮ|| 145 ||
ರಾಯ ಮುದಿದಶರಥನನಾಡಿಸುತ ಕೈಕೇಯಿ ಸ್ವೀಯ ವಶದಲಿ ಕೋಸಲವನಾಳಿದಂತೆ ಮಾಯೆ ಬೊಮ್ಮನ ಬಿನದವಡಿಸಿ ನಮ್ಮೀ ಜಗವ ಕಾಯುವಳು ತನ್ನಿಚ್ಛೆ. – ಮಂಕುತಿಮ್ಮ|| 146 ||
ಮಾಯೆಯೊಮ್ಮೊಮ್ಮೆ ತೋರುವಳು ಮಿಗಿಲಕ್ಕರೆಯ ಮಾಯಿಪಳು ಗಾಯಗಳನೀವಳಿಷ್ಟಗಳ ಮೈಯ ನೀಂ ಮರೆಯೆ ನೂಕುವಳಾಗ ಪಾತಳಕೆ ಪ್ರೇಯಪೂತನೆಯವಳು – ಮಂಕುತಿಮ್ಮ|| 147 ||
ಪ್ರಕೃತಿಯಿಂ ಪೊರಗಿರುವ ನರನಾರು ಸೃಷ್ಟಿಯಲಿ? ಸ್ವಕೃತಿಯೆಂದವನೆನುವುದವಳಿರದೊಡಿರದು ಸುಕೃತವೆನಿಸುವುದವಳ ನೀಂ ವಶಕೆ ಕೊಳುವ ನಯ ವಿಕೃತಿಗೆಡೆಯಾಗದಿರೊ – ಮಂಕುತಿಮ್ಮ|| 148 ||